ಮೆಸಾಚುಸೆಟ್ಸ್
ಅಮೆರಿಕ ಸಂಯುಕ್ತಸಂಸ್ಥಾನಗಳ ಒಂದು ರಾಜ್ಯ. ಮೆಸಾಚುಸೆಟ್ಸ್ ಅಮೆರಿಕದ ಈಶಾನ್ಯ ಭಾಗದಲ್ಲಿದ್ದು ನ್ಯೂ ಇಂಗ್ಲೆಂಡ್ ವಲಯದ ಆರು ರಾಜ್ಯಗಳಲ್ಲಿ ಒಂದು. ಉತ್ತರಕ್ಕೆ ವೆರ್ಮಾಂಟ್ ಮತ್ತು ನ್ಯೂ ಹ್ಯಾಂಪ್ ಷೈರ್, ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ, ದಕ್ಷಿಣಕ್ಕೆ ರೋಡ್ ದ್ವೀಪ, ಕನೆಕ್ಟಿಕಟ್ ರಾಜ್ಯಗಳು ಮತ್ತು ಅಟ್ಲಾಂಟಿಕ್ ಸಾಗರ ಹಾಗೂ ಪಶ್ಚಿಮಕ್ಕೆ ನ್ಯೂಯಾರ್ಕ್ ರಾಜ್ಯ ಇದನ್ನು ಸುತ್ತುವರೆದಿದೆ. ವಿಸ್ತಿರ್ಣ 21546 ಚಕಿಮೀ. ಜನಸಂಖ್ಯೆ 6016425 (1990). ರಾಜಧಾನಿ ಬಾಸ್ಟನ್.

	ಭೌತಲಕ್ಷಣ : ಈ ಪ್ರಾಂತ್ಯದ ತೀರಪ್ರದೇಶದ ಭಾಗಗಳು ಕೊನೆಯ ಹಿಮಯುಗದಲ್ಲಿ ಬೃಹತ್ ಹಿಮರಾಶಿಗಳಿಂದ ಕೂಡಿದ್ದವು. ಈ ಹಿಮರಾಶಿ ಸಾಗರಕ್ಕೆ ಸರಿದ ಮೇಲೆ ಅಲ್ಲಿ ಗಟ್ಟಿ ಮೇಲ್ಪದರದ ಕಲ್ಲುಗುಡ್ಡಗಳಿಂದ ಕೂಡಿದ ಸಮತಟ್ಟಾದ ಬಯಲುಗಳು ನಿರ್ಮಾಣಗೊಂಡವು. ಈ ವಲಯ ಮಧ್ಯ ಮೆಸಾಚುಸೆಟ್ಸ್‍ನ ಪ್ರಸ್ಥಭೂಮಿಯವರೆಗೂ ವ್ಯಾಪಿಸಿದೆ. ಪಶ್ಚಿಮದ ಕಡೆ ಕಲ್ಲುಗುಡ್ಡ ಬೆಟ್ಟಗಳಿಂದ ಕೂಡಿದ ಪ್ರದೇಶವಿದೆ. ಅಲ್ಲಲ್ಲಿ ಮರಳು ಮಿಶ್ರಿತ ನೆಲ ಕಂಡುಬರುತ್ತದೆ. ಮಧ್ಯ ಪ್ರಸ್ಥಭೂಮಿ ಮತ್ತು ಪಶ್ಚಿಮ ವಲಯದಲ್ಲಿ ಅಸಂಖ್ಯಾತ ನದಿತೊರೆಗಳು ಹರಿಯುತ್ತವೆ. ಅದರ ಆಚೆಗೆ ಕನೆಕ್ಟಿಕಟ್ ಕಣಿವೆ ಇದೆ. ಆಮೇಲೆ ಬೆರ್ಕ್‍ಷೈರ್ ಬೆಟ್ಟ ಶ್ರೇಣಿ ಬರುತ್ತದೆ. ಮೆಸಾಚುಸೆಟ್ಸ್‍ನ ಸರಹದ್ದಿನಲ್ಲಿ ಟಕೊನಿಕ್ ಶ್ರೇಣಿ ಇದೆ. ಪೂರ್ವಕ್ಕೆ ಹೂಸ್ಯಾಕ್ ಪರ್ವತ ಶ್ರೇಣಿ ಹಬ್ಬಿದೆ. ರಾಜ್ಯದ ಅತಿ ಎತ್ತರದ ಶಿಕರ ಮೌಂಟ್ ಗ್ರೆಲಾಕ್ (1064 ಮೀಟರ್), ಇದು ಟಕೊನಿಕ್ ಶ್ರೇಣಿಯಲ್ಲಿದೆ.

	ಮೆಸಾಚುಸೆಟ್ಸ್ ದೀರ್ಘ ತೀರಪ್ರದೇಶ ಹೊಂದಿದೆ. ಸುಮಾರು 104 ಕಿಮೀ ಉದ್ದದ ಕೇಪ್‍ಕಾಡ್ ಎಂಬ ಪರ್ಯಾಯ ದ್ವೀಪ, ಮುಖ್ಯ ಭೂಭಾಗದಿಂದ ಪೂರ್ವಕ್ಕೆ ಅಟ್ಲಾಂಟಿಕ್ ಸಾಗರದಲ್ಲಿ ಚಾಚಿದ್ದು ಅನಂತರ ಉತ್ತರಕ್ಕೆ ಬಾಗಿದೆ. ಇದರ ಅಗಲ 1.6 ಕಿಮೀ ನಿಂದ 36 ಕಿಮೀ. ಈ ಕೊಲ್ಲಿಯ ಉತ್ತರದಲ್ಲಿರುವ ಅಟ್ಲಾಂಟಿಕ್ ಸಾಗರದ ಒಳಸರಿಕೆ ಭಾಗವನ್ನು ಮೆಸಾಚುಸೆಟ್ಸ್ ಕೊಲ್ಲಿ ಎಂದು ಕರೆಯಲಾಗಿದೆ.

	ನದಿಗಳು : ಈ ರಾಜ್ಯದಲ್ಲಿ ನಿಬಿಡವಾಗಿ ನದಿಗಳು ಹರಿಯುತ್ತವೆ. ಒಟ್ಟು ಸುಮಾರು 19 ಮುಖ್ಯ ಒಳಹರಿವು ವ್ಯವಸ್ಥೆಗಳಿವೆ. 1200 ಕ್ಕೂ ಹೆಚ್ಚು ಸರೋವರಗಳು ಮತ್ತು ಕೊಳಗಳಿವೆ. ಇಲ್ಲಿಯ ಅನೇಕ ನದಿಗಳು ಮತ್ತು ಸರೋವರಗಳಿಗೆ ಪ್ರಾಚೀನ ರೆಡ್‍ಇಂಡಿಯನ್ನರು ಇಟ್ಟ ಹೆಸರುಗಳನ್ನೇ ಉಳಿಸಿಕೊಳ್ಳಲಾಗಿದೆ. ಕನೆಕ್ಟಿಕಟ್, ಟಾನ್‍ಟನ್, ಮೆರ್ರಿಮ್ಯಾಕ್, ಹೌಸ್ಟಾನಿಕ್, ಬ್ಲಾಕ್ ಸ್ಟೋನ್, ಕಾನ್‍ಕರ್ಡ್, ಚಾಲ್ರ್ಸ್ ಇವು ಇಲ್ಲಿಯ ಮುಖ್ಯ ನದಿಗಳು.

	ವಾಯುಗುಣ : ಪಶ್ಚಿಮ ಮೆಸಾಚುಸೆಟ್ಸ್‍ನಲ್ಲಿ ವಾಯುಗುಣ ತಂಪಾಗಿಯೂ ಶುಷ್ಕವಾಗಿಯೂ ಇರುತ್ತವೆ. ಚಳಿಗಾಲದಲ್ಲಿ ತೀರಪ್ರದೇಶಕ್ಕಿಂತ ಒಳನಾಡಿನಲ್ಲೆ ಹಿಮಸುರಿತ ಹೆಚ್ಚು. ಜುಲೈ ಮತ್ತು ಆಗಸ್ಟ್ ಅತ್ಯಂತ ತಾಪಭರಿತ ತಿಂಗಳುಗಳು. ಒಟ್ಟಿನಲ್ಲಿ ಇಲ್ಲಿಯ ವಾಯುಗುಣ ಸಮಶೀತೋಷ್ಣವೆನ್ನಬಹುದು.

	ಸಸ್ಯ ಮತ್ತು ಪ್ರಾಣಿವರ್ಗ : ಈ ರಾಜ್ಯದಲ್ಲಿ 43 ಉದ್ಯಾನಗಳು ಮತ್ತು 28 ಮೀಸಲು ಅರಣ್ಯಗಳಿವೆ. ಬಾಸ್ಟನ್ ಬಳಿ ಇರುವ ಆರ್ನಾಲ್ಡ್ ಮರಗಿಡಗಳ ತೋಪಿನಲ್ಲಿ ಅಮೆರಿಕದ ಅತಿ ದೊಡ್ಡ ಮರಗಿಡಗಳ ಸಂಗ್ರಹವೊಂದಿದೆ. ಇಲ್ಲಿನ ಅರಣ್ಯಗಳಲ್ಲಿ ಸ್ಯಾಂಡ್ ವೈಪರ್, ಬ್ಯೂಹಾರನ್, ಟರ್‍ಸ್ಟೋನ್, ಮೊದಲಾದ ದೊಡ್ಡ ಜಾತಿಯ ಮರಗಳಿವೆ.

	ಅಸಂಖ್ಯಾತ ಪಕ್ಷಿ ಸಂಕುಲವಿದೆ. ಅವುಗಳಲ್ಲಿ ಕಡಲ ಸಂಬಂಧವಾದ ಜಲಪಕ್ಷಿಗಳು ಅಧಿಕ. ಗಲ್, ಸ್ಕೋಟರ್, ಕಾರ್‍ಮೊರೆಂಟ್, ಮೊದಲಾದ ನಿರಿ ಹಕ್ಕಿಗಳಿವೆ. ಮಿಂಚುಳ್ಳಿ, ಕೋಗಿಲೆ ಜಾತಿಯ ವಾರ್ಬ್, ಬಾಬ್‍ವೈಟ್ ಗುಬ್ಬಚ್ಚಿ, ಗಿಡುಗ, ಗ್ರಾಸ್, ಕಾಡುಟರ್ಕಿ ಮತ್ತು ಹಕ್ಕಿ ಬಾಣ (ಫೀಸೆಂಟ್) ಮೊದಲಾದ ಪಕ್ಷಿಗಳಿವೆ. ಮೂರು ರಾಷ್ಟ್ರೀಯ ವನ್ಯಪ್ರಾಣಿ ಧಾಮಗಳಿವೆ. ಅಲ್ಲಿ ಜಿಂಕೆ, ಹಿಮಮೊಲ, ಕೆಂಪುನರಿ, ವುಡ್‍ಚಿಂಕ್ ಮನ್ಕೆರ್ಟ್, ಆಟರ್, ಚಿಪ್‍ಮಂಕ್ ಮೊದಲಾದ ಪ್ರಾಣಿಗಳಿವೆ.

	ಸಾಗರ ಮತ್ತು ನದಿ ಸರೋವರಗಳಲ್ಲಿ ವಿವಿಧ ಜಾತಿಯ ಅಸಂಖ್ಯ ಮೀನುಗಳಿವೆ. ಇಲ್ಲಿಯ ಮುಖ್ಯ ಕಸಬುಗಳಲ್ಲಿ ಮೀನುಗಾರಿಕೆಯೂ ಒಂದು.

	ಖನಿಜ : ಸುಣ್ಣದಕಲ್ಲು, ಬಳಪದಕಲ್ಲು, ಸಿಲಿಕ, ಸ್ಫಟಿಕ ಶಿಲೆ, ಜೇಡ, ಎಮೆರಿ, ಬೆಣಚುಕಲ್ಲು ಮೊದಲಾದ ಸ್ವಾಭಾವಿಕ ಖನಿಜಗಳಿವೆ.

	ಆರ್ಥಿಕತೆ : ಮೆಸಾಚುಸೆಟ್ಸ್ ವಸಾಹತು ಕಾಲದಿಂದಲೂ ಆರ್ಥಿಕ ಚಟುವಟಿಕೆಯಿಂದ ಕೂಡಿದ ರಾಜ್ಯ. ಮೊದಲ ನೆಲೆಸಿಗರು ಇಲ್ಲಿ ಅನೇಕ ಕೈಗಾರಿಕೆಗಳನ್ನೂ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದರು. ಇಲ್ಲಿಯ ಆರ್ಥಿಕ ಬೆಳವಣಿಗೆಗೆ ಮೇಫ್ಲವರ್ ದಿವಸಗಳಿಂದಲೂ ಗುರುತಿಸಬಹುದಾದ ಪರಂಪರೆ ಹೊಂದಿದ ಸುಮಾರು 800 ಮನೆತನಗಳು ಪ್ರಮುಖ ಕಾಣಿಕೆ ಸಲ್ಲಿಸಿವೆ. ಪ್ರಾರಂಭದಿಂದಲೂ ಬಾಸ್ಟನ್ ನಗರ ರಾಷ್ಟ್ರದ ಹಣಕಾಸು ವ್ಯವಹಾರ ಕೇಂದ್ರಗಳಲ್ಲೊಂದು. ಕೈಗಾರಿಕೆ ಇಲ್ಲಿಯ ಸಂಪತ್ತಿನ ಜೀವಾಳ. ಶೇಕಡಾ 37 ರಷ್ಟು ಜನರು ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಾರೆ. ಗಡಿಯಾರದ ಕಾರ್ಖಾನೆಗಳು ವಾಲ್ಟ್‍ಹ್ಯಾಮ್ ; ಸೇಲಮ್ ಮತ್ತು ಬಾಸ್ಟನ್‍ಗಳಲ್ಲಿವೆ. ಗಾರ್ಡ್‍ಸರ್ ತೂಗು ಆಸನಗಳ ಉದ್ಯಮಕ್ಕೆ ಪ್ರಸಿದ್ಧ. ಗ್ರೀನ್‍ಫೀಲ್ಡ್‍ನಲ್ಲಿ ಕಟ್ಲರಿ ಮತ್ತು ಕೈಉಪಕರಣ ತಯಾರಿಕಾ ಘಟಕಗಳಿವೆ. ಸ್ಪ್ರಿಂಗ್ ಫೀಲ್ಡ್ ಬಂದೂಕುಗಳು ಮತ್ತು ಮೋಟಾರ್ ಸೈಕಲ್‍ಗಳ ತಯಾರಿಕೆಗೆ ಹೆಸರಾಗಿದೆ. ಪೀಬಾಡಿಯಲ್ಲಿ ಚರ್ಮದ ವಸ್ತುಗಳ ತಯಾರಿಕೆಯಿದೆ. ಹೋಲ್‍ಯೋಕ್ ಮತ್ತು ನ್ಯೂಬರಿಗಳಲ್ಲಿ ಬೆಳ್ಳಿಪಾತ್ರೆಗಳ ಉದ್ಯಮ ಪ್ರಧಾನ. ಬಾಸ್ಟನ್‍ನಲ್ಲಿ ರೇಜರ್ ಬ್ಲೇಡುಗಳ ಕಾರ್ಖಾನೆಗಳಿವೆ. ಇಂದು ಮೆಸಾಚುಸೆಟ್ಸನ ಹಲವಾರು ಪಟ್ಟಣಗಳಲ್ಲಿ ಕಾಗದ ತಯಾರಿಕೆ, ಮುದ್ರಣ, ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆ, ಉಡುಪು, ಶೃಂಗಾರ ಸಾಮಾನುಗಳ ಉದ್ಯಮಗಳಿವೆ.

	ಲೈನ್ ನಗರ ಅಮೆರಿಕದ ಪ್ರಮುಖ ಬೂಟು ತಯಾರಿಕಾ ಕೇಂದ್ರ. ಲೈನ್ ರಾಕ್‍ಗಳಲ್ಲಿ ಜೆಟ್ ವಿಮಾನಗಳ ಎಂಜಿನ್ ತಯಾರಿಕಾ ಕಾರ್ಖಾನೆ ಇದೆ. ಈ ರಾಜ್ಯದಲ್ಲಿ ನೌಕೆಗಳು ಮತ್ತು ಸಣ್ಣ ದೋಣಿಗಳನ್ನು ತಯಾರಿಸುವರು.

	ವ್ಯವಸಾಯ : ವ್ಯವಸಾಯ ಇಲ್ಲಿಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸದಿದ್ದರೂ ವ್ಯವಸ್ಥಿತವಾಗಿ ಏರ್ಪಟ್ಟಿದೆ. ಜಾನುವಾರುಗಳಿಗಾಗಿ ಅಧಿಕವಾಗಿ ಹುಲ್ಲು ಬೆಳೆಯುತ್ತಾರೆ. ಧಾನ್ಯ, ಹೊಗೆಸೊಪ್ಪು, ತರಕಾರಿ ಬೆಳೆಯುವರು. ಕ್ರಾನ್‍ಬೆರ್ರಿ ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಪ್ರಮುಖ ಸ್ಥಾನದಲ್ಲಿದೆ. ಆದಾಗ್ಯೂ ಶೇಕಡಾ 2 ರಷ್ಟು ಜನಸಂಖ್ಯೆ ಮಾತ್ರ ವ್ಯವಸಾಯದಲ್ಲಿ ತೊಡಗಿದೆ. ಕೋಳಿ ಸಾಕಾಣಿಕೆಯ ಆದಾಯ ವ್ಯವಸಾಯದ ಆದಾಯದ ಶೇಕಡಾ 10 ರಷ್ಟಿದೆ.

	ಸಾರಿಗೆ : ರಾಷ್ಟ್ರದ ಪ್ರಥಮ ರೈಲುಮಾರ್ಗ ರಚಿತವಾದುದು ಈ ರಾಜ್ಯದಲ್ಲಿ. ಬಾಸ್ಟನ್‍ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಮೊದಲ ಪ್ರಯಾಣಿಕರ ಸುರಂಗ ರೈಲುಮಾರ್ಗ ರಚಿತವಾದುದು ಇಲ್ಲಿ. ಒಟ್ಟು 2400 ಕಿಮೀ ಉದ್ದದ ರೈಲುಮಾರ್ಗವಿದೆ. 5440 ಕಿಮೀ ಉದ್ದದ ರಸ್ತೆ ಮಾರ್ಗವಿದೆ. ಪ್ರವಾಸೋದ್ಯಮ ರಾಜ್ಯದ ಆದಾಯ ಮೂಲಗಳಲ್ಲಿ ಎರಡನೆಯ ಸ್ಥಾನ ಪಡೆದಿದೆ.

	ಶಿಕ್ಷಣ : ಮೆಸಾಚುಸೆಟ್ಸ್, ಶಿಕ್ಷಣದಲ್ಲಿ ಪ್ರಾರಂಭದಿಂದಲೂ ಮುಂದಿರುವ ರಾಜ್ಯ. ಮೊದಲಿಗೆ ತಂಡೋಪತಂಡವಾಗಿ ಬಂದು ನೆಲೆಸಿದ ಆಂಗ್ಲ ಪ್ಯೂರಿ ಟನ್ನರು ಸ್ಥಾಪಿಸಿದ ಕಾಮನ್‍ವೆಲ್ತ್ ಇಲ್ಲಿ ಧಾರ್ಮಿಕ ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೃಢವಾದ ಬುನಾದಿ ಹಾಕಿತು. ಅಮೆರಿಕದ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಯದ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು 1636 ರಲ್ಲಿ ಸ್ಥಾಪಿಸಲಾಯಿತು. ಇದು ಬಾಸ್ಟನ್ ಬಳಿ ನ್ಯೂಟೌನಿನಲ್ಲಿ ಇದ್ದು 1638 ರಲ್ಲಿ ಈ ಕ್ಷೇತ್ರಕ್ಕೆ ಕೇಂಬ್ರಿಜ್ ಎಂಬ ಹೆಸರನ್ನು ಇಡಲಾಯಿತು. ಇದು ಚಾಲ್ರ್ಸ್ ನದಿಯ ದಡದಲ್ಲಿ ಬಾಸ್ಟನ್‍ಗೆ ಎದುರಾಗಿ ನಿರ್ಮಿತವಾಗಿದೆ. ಈ ವಿಶ್ವವಿದ್ಯಾಲಯ ಶಿಕ್ಷಣ, ಇತಿಹಸ, ಸಾಹಿತ್ಯ ಮತ್ತು ವಿಜ್ಞಾನ ವಿಷಯಗಳ ಅಧ್ಯಯನದಲ್ಲಿ ಇಡೀ ರಾಷ್ಟ್ರದಲ್ಲೇ ಪ್ರಸಿದ್ಧವಾಯಿತು. ಇದರಲ್ಲಿ ತಾಂತ್ರಿಕ ಸಂಶೋಧನಾ ಸಂಸ್ಥೆ ರಾಡ್‍ಕ್ಲಿಫ್ ಕಾಲೇಜು ಲೇಸ್ಲಿ ಕಾಲೇಜುಗಳಲ್ಲಿ ಸೇರಿವೆ. 1852 ರಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ ಜಾರಿಗೆ ಬಂದಿತು. ಇಂದು ರಾಜ್ಯಾದ್ಯಂತ ಅರವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಸ್ಥಾಪನೆಯಾಗಿವೆ. ಸ್ಥಳೀಯ ಸಮಿತಿಗಳು ಶಿಕ್ಷಣದ ಬಹುಪಾಲು ಜವಾಬ್ಧಾರಿ ಹೊತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇವೆ. ವೈದ್ಯಕೀಯ ಸಂಶೋಧನೆಯಲ್ಲಿ ಇಲ್ಲಿಯ ಸಂಸ್ಥೆಗಳು ಅಗ್ರಸ್ಥಾನ ಪಡೆದಿವೆ. ಬಾಸ್ಟನ್‍ನಲ್ಲಿ ಮಕ್ಕಳ ಕ್ಯಾನ್ಸರ್ ಸಂಶೋಧನಾ ಪ್ರತಿಷ್ಠಾಪನವಿದೆ ಹಾಗೂ ಜಾರ್ಜ್ ವಾಷಿಂಗ್‍ಟನ್ ಗ್ರಂಥಾಲಯವಿದೆ.

	ಜನಜೀವನ : ಸಮುದ್ರ ತೀರ ಇಲ್ಲಿಯ ಜನಜೀವನದಲ್ಲಿ ಪ್ರಮುಖಪಾತ್ರ ವಹಿಸಿದೆ. ಸಮುದ್ರ ವ್ಯಾಪಾರ, ಸೂರ್ಯಸ್ನಾನ, ಈಜುವಿಕೆ, ಮೀನುಗಾರಿಕೆ ಇವು ತೀರ ಪ್ರದೇಶದ ಪಟ್ಟಣಗಳ ಮತ್ತು ಪ್ರವಾಸಿ ಸ್ಥಳಗಳ ಬೆಳವಣಿಗೆಗೆ ಕಾರಣವಾಗಿವೆ. ಬಾಸ್ಟನ್, ಪ್ಲಿಮತ್, ಡರ್ಬರಿ, ಮಾರ್ಷ್ ಫೀಲ್ಡ್, ಸಿಚ್‍ವಾಟ್ ಕೊಹಸೆಟ್ ಇತ್ಯಾದಿ ಪ್ರಮುಖ ನಗರಗಳು ತೀರಪ್ರದೇಶದಲ್ಲಿವೆ. ಗ್ಲೌಸೆಸ್ಟರ್ ಮತ್ತು ಕೇಪ್ ಆನ್‍ಗಳು ಮುಖ್ಯ ಮೀನುಗಾರಿಕೆ ಕೇಂದ್ರಗಳು. ಕೈಗಾರಿಕೆ, ವ್ಯಾಪಾರ ಮತ್ತು ಪ್ರವಾಸೋದ್ಯಮಗಳು ಇಲ್ಲಿಯ ಜನಜೀವನದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಪ್ರಾರಂಭದಲ್ಲಿ ಪ್ರಾಟೆಸ್ಟೆಂಟ್ ಜನರ ಆಧಿಕ್ಯವಿದ್ದರೂ ಕ್ರಮೇಣ ರೋಮನ್ ಕ್ಯಾಥೊಲಿಕರ ಸಂಖ್ಯ ಅಧಿಕವಾಗಿದೆ. ಜನರು ಧರ್ಮಾಚರಣೆಯಲ್ಲಿ ನಂಬಿಕೆ ಹೊಂದಿದ್ದಾರೆ. ಸರ್ಕಾರ ಚಿತ್ತವಿಕಲರಿಗಾಗಿ ಅನಾಥಾಲಯವನ್ನು ಸ್ಥಾಪಿಸಿದೆ.

	ದೊಡ್ಡ ನಗರ, ಚಾರ್ಟ್‍ರ್ಡ್ ನಗರ ಮತ್ತು ಪಟ್ಟಣಗಳ ಆಡಳಿತ ಮಂಡಳಿಗಳಿವೆ. ಬಾಸ್ಟನ್ ಪ್ರಾರಂಭದಿಂದಲೂ ರಾಷ್ಟ್ರೀಯ ಸಾಂಸ್ಕøತಿಕ ಕೇಂದ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಉನ್ನತ ಸಾಹಿತ್ಯ ಪರಂಪರೆ ಇದೆ. ಎಮರ್ಸನ್, ಥೋರೋ, ಹಾವ್‍ಥ್ರೋನ್, ಲಾಂಗ್ ಫೆಲೊ ಮತ್ತು ಡಿಕಿನ್‍ಸನ್, ಬೋನ್ ಥ್ಯಾಮ್ ಎಡ್ವಡ್ರ್ಸ್ ಮೊದಲಾದ ಪ್ರಖ್ಯಾತ ಸಾಹಿತಿಗಳು ಇಲ್ಲಿಯವರು.

	ಇತಿಹಾಸ : 1524 ರಲ್ಲಿ ವೆರ್ರಜಾನೊ ಎಂಬವನು ಮೆಸಾಚುಸೆಟ್ಸ್ ತೀರವನ್ನು ಸುತ್ತು ಹಾಕಿದ. 1602 ರಲ್ಲಿ ಗಾಸ್‍ನಾಲ್ಡನು ಕೇಪ್‍ಕಾಡನ್ನು ಪರಿಶೋಧಿಸಿದ. 1620 ರಲ್ಲಿ ಪ್ಲಿಮತ್‍ನಲ್ಲಿ ಮೊದಲ ಯಾತ್ರಿಗಳು ನೆಲಸಿದರು. 1643 ರಲ್ಲಿ ನ್ಯೂ ಇಂಗ್ಲೆಂಡ್ ಕಾನ್‍ಫೆಡರೇಷನ್‍ಗೆ ಈ ರಾಜ್ಯ ಸೇರಿತು.

	ಮೆಸಾಚುಸೆಟ್ಸ್‍ನ ಮೂಲನಿವಾಸಿಗಳು ಬಂದವರ ಜೊತೆ ಹೊಂದಿಕೊಂಡು ಜೀವಿಸತೊಡಗಿದರು. ಆಂಗ್ಲಪ್ಯೂರಿಟನ್ನರು ಸ್ಥಾಪಿಸಿದ ಪ್ಯೂರಿಟನ್ ಕಾಮನ್‍ವೆಲ್ತ್ ಇಲ್ಲಿಯ ಅಭಿವೃದ್ಧಿಯಲ್ಲಿ ಮಹತ್ ಪಾತ್ರ ವಹಿಸಿತು. ಅಮೆರಿಕದ ಕ್ರಾಂತಿಯ ನಿಕಟ ಪೂರ್ವ ವರ್ಷಗಳಲ್ಲಿ ಮೆಸಾಚುಸೆಟ್ಸ್ ಪ್ರಮುಖ ಕೇಂದ್ರವಾಗಿತ್ತು. ಕ್ರಾಂತಿಯ ಪ್ರಥಮ ಕಿಡಿ ಹಾರಿದ್ದು ಲೆಕ್ಸಿಂಗ್‍ಟನ್ನಿನಲ್ಲಿ (1775). ಬಾಸ್ಟನ್ ನಗರದಲ್ಲಿ ದಂಗೆ ನಡೆಯಿತು. 19 ನೆಯ ಶತಮಾನದಲ್ಲಿ ನಡೆದ ಗುಲಾಮಶಾಹಿ ವಿರೋಧಿ ಚಳವಳಿ ಇಲ್ಲಿ ಪ್ರಖರವಾಗಿ ನಡೆಯಿತು. ಮೂಲ ಸಂವಿಧಾನದ ಮೇರೆಗೆ ಆಡಳಿತ ನಡೆಸುತ್ತಿರುವ ರಾಜ್ಯ ಮೆಸಾಚುಸೆಟ್ಸ್ ಒಂದೇ. ಇಪ್ಪತ್ತನೆಯ ಶತಮಾನದ ಮೊದಲ ಅರ್ಧಭಾಗದಲ್ಲಿ ಇಟಾಲಿಯನ್ನರು ಅಧಿಕ ಸಂಖ್ಯೆಯಲ್ಲಿ ನೆಲೆಸಿದರು. 1960 ಮತ್ತು 70 ರ ದಶಕಗಳಲ್ಲಿ ಬಂದವರ ಪೈಕಿ ಕ್ಯೂಬಾ ಮತ್ತು ಪೋರ್ಟ್‍ರಿಕೊ ಸಂಜಾತರೇ ಅಧಿಕ. 1960 ರ ದಶಕದಲ್ಲಿ ನಗರ ಪ್ರದೇಶಗಳಲ್ಲಿ ಜನಾಂಗೀಯ ಘರ್ಷಣೆಗಳು ನಡೆದವು. ಇಲ್ಲಿಯ ಕರಿಯರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದಾರೆ. ಮತದಾರರು ಗವರ್ನರನನ್ನು ಎರಡು ವರ್ಷಗಳ ಅವಧಿಗೆ ಚುನಾಯಿಸುತ್ತಾರೆ. ಸೆನೆಟ್ ಮತ್ತು ಪ್ರತಿನಿಧಿ ಸಭೆಗಳಿವೆ. ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಾಧಿಕಾರಿಗಳನ್ನು ಗವರ್ನರ್ ನೇಮಿಸುತ್ತಾನೆ.

	ಬಾಸ್ಟನ್, ಬ್ರಿಕ್‍ಟನ್, ಫಾಲ್ ರಿವರ್, ಪಿಟ್ಸ್‍ಬರ್ಗ್, ಲಿಯೊಮೆಸ್ಟರ್, ಲಾರೆನ್ಸ್‍ಹ್ಯಾವರ್‍ಹಿಲ್, ನ್ಯೂಬೆಡ್‍ಫೋರ್ಡ್, ಪಿಟ್ಸ್‍ಫೀಲ್ಡ್, ಸ್ಟ್ರಿಂಗ್‍ಫೀಲ್ಡ್, ಚಿಕೊಪಿ, ಹೋಲ್‍ಯೋಕ್ ಮತ್ತು ವೊರ್‍ಸೆಪ್ಚರ್ ಮೊದಲಾದ ಪ್ರಮುಖ ನಗರಗಳಿವೆ. ಬಿನ್‍ಕೆರ್ ಹಿಲ್ ಸ್ಮಾರಕ, ಆಲ್ಡೆನ್ ಹೌಸ್, ಓಲ್ಡ್ ನಾರ್ತಚರ್ಚ್, ಪ್ರಾವಿನ್ಸ್‍ಟೌನ್, ಸ್ಟೇಟ್ ಹೌಸ್, ವಾಲ್ಡೆನ್ ಪಾಂಡ್, ಪ್ಲಿಮತ್, ಓಲ್ಡ್ ಸ್ಟರ್‍ಬ್ರಿಡ್ಜ್ ವಿಲೇಜ್, ಪಾನೆವಿಲ್ ಹಾಲ್ ಇಲ್ಲಿಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು. ಇವುಗಳಲ್ಲದೆ ಅನೇಕ ರಾಷ್ಟ್ರೀಯ ವನಗಳು ಮತ್ತು ಅರಣ್ಯಗಳೂ ಇವೆ.
									          (ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ